ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮೇ ೨೦೧೫ ರಲ್ಲಿ ಮರುನಾಮಕರಣ ಮಾಡಲಾಗಿ, ೩ ಫೆಬ್ರವರಿ ೨೦೧೬ ರಿಂದ ಅಧಿಕೃತಗೊಳಿಸಲಾಗಿದೆ. ಈ ನಿಲ್ದಾಣವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಾಗಿಕೊಂಡಿದೆ. ಈ ನಿಲ್ದಾಣವು ನೈಋತ್ಯ ರೈಲ್ವೆ ಹಾಗು ಭಾರತೀಯ ರೈಲ್ವೆಯ ಬಹುಮುಖ್ಯ ಕೇಂದ್ರವಾಗಿದೆ. ಈ ನಿಲ್ದಾಣವು ೧೦ ಅಂಕಣಗಳು ಹಾಗು ೨ ಪ್ರವೇಶ ದ್ವಾರಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. == ಕೂಡು ನಿಲ್ದಾಣ(ಜಂಕ್ಷನ್) == ಬೆಂಗಳೂರು ಭಾರತದ ಬಹುಮುಖ್ಯ ಕೂಡು ನಿಲ್ದಾಣಗಳಲ್ಲೊಂದಾಗಿದೆ. ಮೊದಲ ೭ ಅಂಕಣಗಳು ಚೆನ್ನೈ ಮತ್ತು ಸೇಲಂ ರೈಲ್ವೆ ಮಾರ್ಗಗಳನ್ನು ಸಂಪರ್ಕಿಸುತ್ತವೆ. ಹುಬ್ಬಳ್ಳಿಯಿಂದ ಯಶವಂತಪುರ ಮಾರ್ಗದಲ್ಲಿ ಬರುವ ರೈಲುಗಳು ೮ ರಿಂದ ೧೦ನೆ ಅಂಕಣಗಳನ್ನು ಸೇರುತ್ತವೆ . ಅಂಕಣ ೫ ರಿಂದ ೧೦ರಲ್ಲಿ, ಮೈಸೂರುಕಡೆಗೆ ಪ್ರಯಾಣಿಕ ಗಾಡಿಗಳು ಹೊರಡುತ್ತವೆ. ಅಂಕಣ ೪ ಮತ್ತು ೫ರ ಮಧ್ಯ ಇರುವ ಹಳಿಗಳನ್ನು ರೈಲುಗಳನ್ನು ನಿಲ್ಲಿಸಲು ಬಳಸಲಾಗುತ್ತದೆ. ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ೫ ರೈಲ್ವೆ ಮಾರ್ಗಗಳು ಹಾದು ಹೋಗುತ್ತವೆ. ಗುಂತಕಲ್ ಮಾರ್ಗವಾಗಿ ಹೈದರಾಬಾದ್, ಕೃಷ್ಣರಾಜಪುರ ಮಾರ್ಗವಾಗಿ ಚೆನ್ನೈ, ಹೊಸೂರು ಮಾರ್ಗವಾಗಿ ಸೇಲಂ, ಮೈಸೂರು, ತುಮಕೂರು ಮಾರ್ಗವಾಗಿ ಹುಬ್ಬಳ್ಳಿ, ಬೀರೂರು. ಬೆಂಗಳೂರು ದಂಡು, ಬಂಗಾರಪೇಟೆ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗವನ್ನು ಸಂಪೂರ್ಣ ವಿದ್ಯುದೀಕರಿಸಲಾಗಿದ್ದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ನಿಲ್ದಾಣದಿಂದ ದಿನಂಪ್ರತಿ ೬೩ ವೇಗದೂತ ರೈಲುಗಳನ್ನೊಳಗೊಂಡು ಒಟ್ಟು ೮೮ ರೈಲುಗಳು ಕಾರ್ಯಾಚರಿಸುತ್ತವೆ ಮತ್ತು ಅಂದಾಜು ೨,೨೦,೦೦೦ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ. == ರೈಲ್ವೆ ಬಡಾವಣೆ == ನಿಲ್ದಾಣದ ಹಿಂಭಾಗದಲ್ಲಿ ರೈಲ್ವೆ ಸಿಬ್ಬಂದಿಗಳಿಗಾಗಿಯೆ ಬಡಾವಣೆಯೊಂದನ್ನು ಸ್ಥಾಪಿಸಲಾಗಿದ್ದು. ಈ ಕಾಲೋನಿಯು ಶಾಲೆ, ಆಸ್ಪತ್ರೆ, ಆಟದ ಮೈದಾನ ಮುಂತಾದ ಮೂಲಸೌಕರ್ಯಗಳನ್ನೊಳಗೊಂಡಿದೆ. == ವಿಸ್ತರಣೆ == ಟಿಕೇಟ್ ಮುಂಗಟ್ಟೆ, ಕೆಳಮಹಡಿಯ ವಾಹನ ನಿಲ್ದಾಣ ಹಾಗು ಪ್ರಯಾಣಿಕರ ಚಾವಡಿಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವು ಓಕಳೀಪುರ ಪ್ರವೇಶ ದ್ವಾರದಲ್ಲಿ ಸೇವೆಗೆ ಮುಕ್ತಗೊಳಿಸಲಾಗಿದೆ. == ಸ್ಥಳ == ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ನ ಹತ್ತಿರ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==